 ಫಿಷರ್, ಹನ್ಸಿಗರ್ ವೆಲ್ತಿ
	1879-1980. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಅಮೆರಿಕದ ಮಹಿಳೆ. ಗಾಂಧೀಜಿಯವರ ಆಣತಿಯಂತೆ ಭಾರತದಲ್ಲಿ ನೆಲಸಿ ವಯಸ್ಕರ ಶಿಕ್ಞಣ ಕಾರ್ಯಕ್ರಮದಲ್ಲಿ ನಿರತಳಾದಳು. ಈ ಕ್ಷೇತ್ರದಲ್ಲಿ ಈಕೆ ಸಲ್ಲಿಸಿರುವ ಸೇವೆಯನ್ನು ಮೆಚ್ಚಿ ಅಖಿಲ ಭಾರತ ವಯಸ್ಕರ ಶಿಕ್ಷಣ ಮಂಡಳಿ ನೆಹರು ಸಾಕ್ಷರತಾ ಪಾರಿತೋಷಕವನ್ನು ನೀಡಿತು (1971). ಲಕ್ನೊ ಸಾಕ್ಷರತಾ ನಿಕೇತನ ಇಂದಿಗೂ ಸ್ಥಾಪಕಿಯಾದ ಈಕೆಯ ಹೆಸರನ್ನು ಬೆಳಗುತ್ತಿದೆ.

	ಈಕೆ ಹುಟ್ಟಿದ್ದು ನ್ಯೂಯಾರ್ಕಿನ ಹತ್ತಿರವಿರುವ ರೋಮ್‍ನಲ್ಲಿ. ಶಾಲಾ ಶಿಕ್ಷಣ ನ್ಯೂಯಾರ್ಕಿನಲ್ಲಿ ನಡೆಯಿತು. ಅನಂತರ ಸಿರಾಕ್ಯೂಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಪದವೀಧರೆಯಾದಳು. ಆಗ ಈಕೆಯ ವಯಸ್ಸು 26. ಸಂಗೀತ ಕಲಿತು ಅದರಿಂದಲೇ ಜೀವನ ಸಾಗಿಸಬೇಕೆಂದಿದ್ದಳು. ಆದರೆ ವಿಧಿ ಅವಳನ್ನು ಚೀನಕ್ಕೆ ಕರೆದೊಯ್ದಿತು. ನಾನ್ ಚುಂಗ್‍ನ ಬಾಲ್ಡ್‍ವಿನ್ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಚೀನ ಅಮೆರಿಕಗಳ ನಡುವಣ ಭೇದವನ್ನು ತಪ್ಪಿಸಲು ಹೆಣಗಿದಳು. ತಾನೂ ಚೀನೀಯರಂತೆಯೇ ಇರತೊಡಗಿ ಬಿಳಿಯರ ಕೋಪಕ್ಕೆ ಕಾರಣಳಾದಳು.

	ತಾನಿದ್ದ ಶಾಲೆಯ ಕಟ್ಟಡ ಆಕಸ್ಮಿಕವಾಗಿ ಅಗ್ನಿಗೆ ಆಹುತಿಯಾದಾಗ (1910) ಕಟ್ಟಡದ ನಿರ್ಮಾಣಕ್ಕಾಗಿ ಅಮೆರಿಕದಲ್ಲಿ ಪ್ರವಾಸ ಮಾಡಿ ಹಣ ಸಂಗ್ರಹಿಸಿ ಹಳೆಯ ಶಾಲೆಯ ಹತ್ತಿರವಿದ್ದ 12 ಎಕರೆ ಜಮೀನನ್ನು ಶಾಲೆಗಾಗಿ ಕೊಂಡಳು.

	ಮೊದಲನೆಯ ಮಹಾಯುದ್ಧ ಪ್ರಾರಂಭವಾದಾಗ ತಾನು ಕಟ್ಟಿಸಿದ್ದ ಶಾಲೆಯನ್ನು ಚೀನಿಯರಿಗೆ ಬಿಟ್ಟುಕೊಟ್ಟು ಸ್ವದೇಶಕ್ಕೆ ಮರಳಿದಳು. ಫ್ರಾನ್ಸಿಗೆ ಹೋಗಿ ಅಲ್ಲಿ ಯುದ್ಧದಲ್ಲಿ ನಿರತರಾಗಿದ್ದ ಸೈನಿಕರ ಸೇವೆಗೆ ನಿಂತಳು.

	ನಲವತ್ನಾಲ್ಕನೆಯ ವಯಸ್ಸಿನಲ್ಲಿ ಫ್ರೆಡರಿಕ್ ಜಾನ್ ಫಿಷರ್ ಎಂಬಾತನನ್ನು ಮದುವೆ ಆದಳು. ನವದಂಪತಿಗಳು ಚೀನ ಮತ್ತು ಬರ್ಮ ದೇಶಗಳ ಪ್ರವಾಸ ಮುಗಿಸಿಕೊಂಡು ಟಿಬೆಟ್ಟಿಗೆ ಬಂದರು. ಅಲ್ಲಿ ನೆಲಸುವ ಆಶೆ ಈಡೇರದಿದ್ದಾಗ ಗಂಡ ಫಿಷರ್ ಮರಣಹೊಂದಿದ. ಅಲ್ಲಿಂದ ಮುಂದೆ ಶ್ರೀಮತಿ ಫಿಷರ್ ಜನಸೇವೆಗೆ ಟೊಂಕಕಟ್ಟಿ ನಿಂತಳು.

	ಮಹಾತ್ಮ ಗಾಂಧೀಜಿಯವರ ಸಲಹೆಯಂತೆ ಭಾರತಕ್ಕೆ ಬಂದು 1953ರಲ್ಲಿ ಅಲಹಾಬಾದಿನಲ್ಲಿ ಸಾಕ್ಷರತಾ ವಿದ್ಯಾಲಯವೊಂದನ್ನು ತೆರೆದಳು. ತಾನೆ ವಾಸಿಸುತ್ತಿದ್ದ ಮನೆಯ ಕೈಸಾಲೆಯಲ್ಲಿ ವಯಸ್ಕರ ತರಗತಿಯೊಂದನ್ನು ಪ್ರಾರಂಭಿಸಿದಳು. ಕೆಲವು ಕಾಲಾನಂತರ ತನ್ನದೇ ಆದ ವ್ಯಾಪಕ ಸಂಸ್ಥೆಯನ್ನು ತೆರೆಯಲು ಇಚ್ಛಿಸಿದಳು. ಅದಕ್ಕಾಗಿ ಅಮೆರಿಕದಲ್ಲಿ ಪ್ರವಾಸ ಮಾಡಿ ಹಣ ಸಂಗ್ರಹಿಸಿ ಲಕ್ನೊ ಹತ್ತಿರ ಹತ್ತು ಎಕರೆ ಜಮೀನನ್ನು ಕೊಂಡು ಸಾಕ್ಷರತಾ ನಿಕೇತನ ಎಂಬ ಹೆಸರಾಂತ ಸಂಸ್ಥೆಯನ್ನು ಸ್ಥಾಪಿಸಿದಳು. ಇಂದು ಅದು ವ್ಯಾಪಕವಾದ ರಾಷ್ಟ್ರೀಯ ಸಂಸ್ಥೆಯಾಗಿದೆ. ಅಲ್ಲಿ ವಯಸ್ಕರ ಪಠ್ಯಪುಸ್ತಕ ರಚನೆ, ನವಸಾಕ್ಷರತಾ ಸಾಹಿತ್ಯ ರಚನೆ ಮತ್ತು ತರಬೇತಿ, ಸಂಚಾರಿ ಪುಸ್ತಕ ಭಂಡಾರ ಯೋಜನೆ, ಸೂತ್ರದ ಗೊಂಬೆ ತಯಾರಿಕೆ ಮತ್ತು ಅದರ ಪ್ರದರ್ಶನದಲ್ಲಿ ತರಬೇತಿ, ಭಿತ್ತಿಪತ್ರಗಳ ತಯಾರಿಕೆ, ವಯಸ್ಕರ ಶಿಕ್ಷಣ ಕಾರ್ಯಕರ್ತರ ತರಬೇತಿ, ಕುಟುಂಬದ ಕಲ್ಯಾಣ ಯೋಜನೆ, ಪಂಚಾಯಿತಿ ರಾಜ್ಯ ತರಬೇತಿ ಕೇಂದ್ರ ಮುಂತಾದ ವಿಭಾಗಗಳಿವೆ.

	ನವಸಾಕ್ಷರರ ಸಾಹಿತ್ಯ ರಚನೆಗಾಗಿ ಪ್ರಾರಂಭವಾದ ಇಲ್ಲಿನ ಯೋಜನೆಗೆ ಫೋರ್ಡ್ ಫೌಂಡೇಶನ್ ಸಂಸ್ಥೆ 69 ಸಾವಿರ ಡಾಲರು ಹಣ ನೀಡಿತು. ದೇಶವಿದೇಶಗಳಿಂದ ಸುಮಾರು 230 ತಜ್ಞರು ಇಲ್ಲಿಗೆ ಬಂದು ವಯಸ್ಕರು ಶಿಕ್ಷಣದ ಬಗ್ಗೆ ಹೆಚ್ಚಿನ ತರಬೇತಿ ಪಡೆದಿದ್ದಾರೆ. 
	ಈ ಸಂಸ್ಥೆಯಿಂದ ನವಸಾಕ್ಷರರಿಗೆ ಹಿಂದಿಯಲ್ಲಿ ಕೆಲವು ಒಳ್ಳೆಯ ಪುಸ್ತಕಗಳು ಪ್ರಕಟವಾಗಿವೆ. ಅವುಗಳಲ್ಲಿ ಕೆಲವು ಭಾರತ ಸರ್ಕಾರದ ಬಹುಮಾನ ಪಡೆದಿವೆ, ಸಾಕ್ಷರತಾ ನಿಕೇತನದ ಹಿಂದಿ ಪ್ರಕಟಣೆಗಳನ್ನು ಇತರ ಭಾರತೀಯ ಭಾಷೆಗಳಿಗೆ ಭಾಷಾಂತರಿಸಿ ಪ್ರಕಟಿಸುವ ಯೋಜನೆಯನ್ನು ಈ ಸಂಸ್ಥೆ ಕೈಗೊಂಡಿತು. ಈ ಯೋಜನೆಯಲ್ಲಿ ವಿವಿಧ ವಯಸ್ಕರ ಶಿಕ್ಷಣ ಸಂಸ್ಥೆಗಳು ಪಾಲುಗೊಂಡವು. ಈಗ ಹಣದ ಅಭಾವದಿಂದ ಮೇಲ್ಕಂಡ ಈ ಎರಡು ಯೋಜನೆಗಳನ್ನು ಸಂಸ್ಥೆ ಕೈಬಿಟ್ಟಿದೆ. 

	ಶ್ರೀಮತಿ ಫಿಷರ್ ಅವರ ಸೇವೆಯನ್ನು ಮೆಚ್ಚಿ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಸಂಸ್ಥೆಗಳು ಆಕೆಗೆ ಪಾರಿತೋಷಕ ನೀಡಿವೆ. 1964ರಲ್ಲಿ ರಾಮೋನ್ ಮ್ಯಾಗ್ಸ್ ಪಾರಿತೋಷಕ ಆಕೆಗೆ ದೊರೆಯಿತು. ಅದರ ಮೌಲ್ಯ ಹತ್ತು ಸಾವಿರ ಡಾಲರು. ಈ ಹಣದಿಂದ 1966ರಲ್ಲಿ ಫಿಷರ್ ಕಿಸಾನ್ ವಿದ್ಯಾಪೀಠವನ್ನು ಸ್ಥಾಪಿಸಿದಳು. 1968ನೆಯ ಸಾಲಿನ ಮಹಮದ್ ರೆಜಾ ಫಹಲ್ವಿ ಅಂತರರಾಷ್ಟ್ರೀಯ ಪಾರಿತೋಷಕ ಇವರದಾಯಿತು. 1971ರ ಏಪ್ರಿಲ್ ತಿಂಗಳಿನಲ್ಲಿ ಅಮೆರಿಕದ ಅಂತರರಾಷ್ಟ್ರೀಯ ವೆರೈಟಿ ಕ್ಲಬ್ಬು ಅವರಿಗೆ ಹ್ಯೂಮಾನಿಟೀರಿಯನ್ ಅವಾರ್ಡ್ ನೀಡಿತು. ಇದು ಆ ಕ್ಲಬ್ ನೀಡಿರುವ ಮೂರನೆಯ ಪ್ರಶಸ್ತಿ. ಹಿಂದಿನ ಎರಡು ಪಾರಿತೋಷಿಕಗಳನ್ನು ಪಡೆದ ಮಹಾವ್ಯಕ್ತಿಗಳು ಸರ್ ವಿನ್‍ಸ್ಟನ್ ಚರ್ಚಿಲ್ ಮತ್ತು ಆಲ್ಬರ್ಟ್ ಸ್ವಿಟ್ಜರ್. 

	ಫಿಷರ್ ಒಳ್ಳೆಯ ಬರಹಗಾರಳು. ಆಕೆಯ ಹಮ್ ಸರಕಾರ್ ಹೈ ಎಂಬ ಪುಸ್ತಕದ ಐವತ್ತು ಸಾವಿರ ಪ್ರತಿಗಳನ್ನು ಭಾರತ ಸರಕಾರ ಕೊಂಡು ಆಕೆಯನ್ನು ಗೌರವಿಸಿದೆ. ಶಿಕ್ಷಣದ ವಿಚಾರವಾಗಿ ಈಕೆ ಎಂಟು ಪುಸ್ತಕಗಳನ್ನು ಮತ್ತು ಹಲವಾರು ಪ್ರಬಂಧಗಳನ್ನೂ ರಚಿಸಿರುವಳು.
(ಟಿ.ಆರ್.ಎನ್.)